Press ESC to close

ಪ್ರವಾದಿ ಪತ್ನಿ ಆಯಿಷಾ ಪ್ರಬುದ್ಧ ನಾಯಕಿಯಾಗಿದ್ದರು – ಬಾಲಿಕಾ ವಧುವಾಗಿರಲಿಲ್ಲ.

ಅಬ್ದುಸ್ಸಲಾಮ್ ಪುತ್ತಿಗೆ

 
ಅಬೂಬಕರ್ (ರ) ರ  ಮಗಳು ಹಜ್ರತ್ ಆಯಿಷಾ ಸಿದ್ದೀಖಾ (ರ) ಮುಸ್ಲಿಂ ಸಮಾಜದಲ್ಲಿ  ಅಪಾರ ಗೌರವಕ್ಕೆ ಪಾತ್ರರಾಗಿರುವ ಓರ್ವ ಮಹಾನ್ ಮಹಿಳೆ. ಅವರು ಪ್ರವಾದಿ ಮುಹಮ್ಮದ್ (ಸ) ರ ಪತ್ನಿಯಾಗಿದ್ದರು ಮತ್ತು ಪ್ರವಾದಿಯ ಅತ್ಯಂತ ಆಪ್ತ ಸಂಗಾತಿಯಾಗಿದ್ದ ಹಜ್ರತ್ ಅಬೂ ಬಕರ್ (ರ) ರ ಪುತ್ರಿಯಾಗಿದ್ದರು. ಮುಸ್ಲಿಮರು ಅವರನ್ನು ಆದರಪೂರ್ವಕ  ‘ಉಮ್ಮುಲ್ ಮೂಮಿನೀನ್’ (ಧರ್ಮ ವಿಶ್ವಾಸಿಗಳ ಮಾತೆ) ಎಂದೂ ‘ಸಯ್ಯಿದಾ’ (ನಾಯಕಿ) ಅಥವಾ ‘ಸಿದ್ದೀಖಾ[ (ಪರಮ ಸತ್ಯವಂತೆ) ಎಂದೂ ಕರೆಯುತ್ತಾರೆ. ಅವರ ಪ್ರಸ್ತಾಪ ಬಂದಾಗಲೆಲ್ಲ ‘ರಜಿಯಲ್ಲಾಹು ಅನ್ಹಾ’ (ಅಲ್ಲಾಹನು ಅವರನ್ನು ಮೆಚ್ಚಿಕೊಂಡನು ಅಥವಾ ಅವರು ಅಲ್ಲಾಹನ ಮೆಚ್ಚುಗೆಗೆ ಪಾತ್ರರಾದರು) ಎನ್ನುತ್ತಾರೆ. ಅವರ ಹೆಸರನ್ನು  ಬರೆಯುವಾಗಲೂ ಇದರ ಸಂಕ್ಷೇಪವಾಗಿ ‘ರ’ ಎಂಬಕ್ಷರವನ್ನು ಹೆಸರಿನ ಬೆನ್ನಿಗೆ ಕಂಸಗಳೊಳಗೆ ಬರೆಯುತ್ತಾರೆ. ಇದು ಮುಸ್ಲಿಮ್  ಸಮಾಜದಲ್ಲಿ ಹಿಂದಿನಿಂದಲೂ ಜಾರಿಯಲ್ಲಿರುವ ಒಂದು ಶಿಷ್ಟಾಚಾರ. ಹಾಗೆಯೇ ಇದು ಆಯಿಷಾ (ರ) ರ ಕುರಿತು ಮುಸ್ಲಿಂ ಸಮಾಜದಲ್ಲಿರುವ ಗೌರವದ ಸೂಚನೆಯಾಗಿದೆ.     
 
ಪ್ರವಾದಿ ಮುಹಮ್ಮದ್ (ಸ) ರನ್ನು ವಿವಾಹವಾಗುವಾಗ ಆಯಿಷಾ(ರ) ಕೇವಲ ಆರು ವರ್ಷದ ಮಗುವಾಗಿದ್ದರು ಎಂಬೊಂದು ಸುಳ್ಳು ಕಳೆದ ಕೆಲವು ದಶಕಗಳಿಂದ ವಿವಾದದ ವಸ್ತುವಾಗಿ ಚರ್ಚೆಯಲ್ಲಿದೆ. ಇದನ್ನು ಚರ್ಚೆಗೆ ತಂದವರು, ತಾವು ಪೌರ್ವಾತ್ಯ ಧರ್ಮ, ಸಂಸ್ಕೃತಿ, ಇತಿಹಾಸ, ಕಲೆ ಸಾಹಿತ್ಯ ಇತ್ಯಾದಿಗಳ ಕುರಿತಂತೆ ಅಧ್ಯಯನ ಹಾಗೂ ಸಂಶೋಧನೆ ನಡೆಸಿರುವ ತಜ್ಞರೆಂದು ತಮ್ಮನ್ನು ಪರಿಚಯಿಸಿಕೊಂಡ ಕೆಲವು ಪಾಶ್ಚಿಮಾತ್ಯ ಓರಿಯೆಂಟಲಿಸ್ಟ್ ಗಳು. ‘ಬುಖಾರಿ’ಯಂತಹ ಕೆಲವು ಪ್ರಸಿದ್ಧ ಹದೀಸ್ ಗ್ರಂಥಗಳಲ್ಲಿ ಹಾಗೆ ಪ್ರಸ್ತಾಪಿಸಲಾಗಿದೆ ಎಂಬ ಒಂದೇ ಆಧಾರದಲ್ಲಿ ಅವರು, ಆರನೇ ವಯಸ್ಸಿನಲ್ಲಿ ಆಯಿಷಾ, ಪ್ರವಾದಿ ಮುಹಮ್ಮದ್ (ಸ) ರನ್ನು ಔಪಚಾರಿಕವಾಗಿ ವಿವಾಹವಾದರು ಮತ್ತು ಒಂಭತ್ತನೇ ವಯಸ್ಸಿನಲ್ಲಿ ಪ್ರವಾದಿಯ ಕುಟುಂಬವನ್ನು ಸೇರಿಕೊಂಡರು ಎಂಬ ಸುಳ್ಳನ್ನು ಧಾರಾಳ ಪ್ರಚಾರ ಮಾಡಿದರು. ಜೊತೆಗೆ ಈ ಸುಳ್ಳಿನ ಆಧಾರದಲ್ಲಿ, ಪ್ರವಾದಿ ಮುಹಮ್ಮದ್ (ಸ)  ಒಂಭತ್ತು ವರ್ಷದ ಒಬ್ಬ ಬಾಲಕಿಯನ್ನು ತಮ್ಮ ಪತ್ನಿಯಾಗಿಸಿ ಆಕೆಯ ಜೊತೆ ಸಂಸಾರ ನಡೆಸಿದರು ಎನ್ನುತ್ತಾ ಪ್ರವಾದಿವರ್ಯರ ಚಾರಿತ್ರ್ಯದ ಮೇಲೆ ಕೆಸರೆರಚಲು ಶ್ರಮಿಸಿದರು. ಕೆಲವು ಕತೆಗಾರರು ಮತ್ತು ಕಾದಂಬರಿಕಾರರು ತಮ್ಮ ಕತೆಗಳಿಗೆ ರಂಗು ಸೇರಿಸಲು ಇವರ ವಿಕೃತ ಸಂಶೋಧನೆಯನ್ನು ಅವಲಂಬಿಸಿದರು. ಆ ಮೂಲಕ ಸುಳ್ಳಿಗೆ ಮತ್ತಷ್ಟು ಪ್ರಚಾರ ಕೊಟ್ಟರು. ಕೆಸರನ್ನೇ ತಿನ್ನುತ್ತಾ ತಿನ್ನಿಸುತ್ತ ಬದುಕುವುದನ್ನು ತಮ್ಮ ಕಾಯಕವಾಗಿಸಿಕೊಂಡಿರುವ ಕೆಲವರು ಪ್ರವಾದಿಯ ವಿರುದ್ಧ ಹರಿ ಹಾಯ್ದು ತಮ್ಮ ತೀಟೆ ತೀರಿಸಿಕೊಳ್ಳಲು ಈ ಸುಳ್ಳನ್ನು ಕೈಗೆತ್ತಿಕೊಂಡು ಕೆಸರಲ್ಲಿ ಹೊರಳಾಡುವ ಮತ್ತು ಜನರನ್ನೂ ಹೊರಳಾಡಿಸುವ  ಕಸರತ್ತಿನಲ್ಲಿ ತೊಡಗಿಕೊಂಡರು. ನಿಜವಾಗಿ ಈ ವಿಷಯವನ್ನು ಚರ್ಚಿಸುವವರು ಸತ್ಯದ ಕುರಿತು  ಸ್ವಲ್ಪವಾದರೂ ಪ್ರಾಮಾಣಿಕ ಆಸಕ್ತಿ ಉಳ್ಳವರಾಗಿದ್ದರೆ ಆಯಿಷಾ (ರ) ಅವರ ವಯಸ್ಸಿನ ಕುರಿತಾದ ಪ್ರಸ್ತುತ ಮಾಹಿತಿ ತಪ್ಪು ಎಂಬುದನ್ನು ನಿಚ್ಚಳವಾಗಿ ಸಾಬೀತು ಪಡಿಸುವ ಆಧಾರಗಳ ಕಡೆಗೊಮ್ಮೆ ಗಮನ ಹರಿಸಬೇಕು. ಆ ರೀತಿ ಗಮನ ಹರಿಸಿದವರಿಗೆಲ್ಲಾ, ಪ್ರಸ್ತುತ ಮಾಹಿತಿ ತಪ್ಪು ಎಂಬುದು ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ಮನವರಿಕೆಯಾಗಿದೆ.  ಇಲ್ಲಿ ನಾವೀಗ ಈ ಕುರಿತಾಗಿ ಲಭ್ಯವಿರುವ ನೇರ ಹಾಗೂ ಪರೋಕ್ಷವಾದ ಕೆಲವು ವಿಭಿನ್ನ ಪುರಾವೆಗಳನ್ನುಒಂದೊಂದಾಗಿ ನೋಡೋಣ:
1.  ಪ್ರವಾದಿ ಮುಹಮ್ಮದ್(ಸ) ರ ಬದುಕಿನ ಕುರಿತು ವಿವರಗಳನ್ನು ಅರಿಯಲು ಹಲವು ನಂಬಲರ್ಹ ಮೂಲಗಳಿವೆ. ಉದಾ: ೧. ಪವಿತ್ರ ಕುರ್ ಆನ್, ೨. ಹಲವಾರು ಹದೀಸ್ ಸಂಗ್ರಹ ಗ್ರಂಥಗಳು (ಅವು ಪ್ರವಾದಿವರ್ಯರ ಮಾತು ಮತ್ತು ಕೃತಿಗಳ, ಹಾಗೂ ಅವರ ಕುರಿತಾಗಿ ಅವರ ಸಮಕಾಲೀನರು ನೀಡಿದ ಹೇಳಿಕೆಗಳ ದಾಖಲೆಗಳು), ೩. ಪ್ರವಾದಿ ಜೀವನ ಚರಿತ್ರೆಗೆಂದೇ ಮೀಸಲಾಗಿರುವ  ಹಲವಾರು ‘ಸೀರತ್’ ಗ್ರಂಥಗಳು ಮತ್ತು ೪. ‘ತಾರೀಕ್’ ಅಥವಾ ಆ ಕಾಲದ ಸಾಮಾನ್ಯ ಇತಿಹಾಸವನ್ನು ದಾಖಲಿಸಿರುವ ಹಲವು ಇತಿಹಾಸ ಗ್ರಂಥಗಳು. ಈ ಪೈಕಿ ಕುರ್ ಆನ್ ನಲ್ಲಿ ಎಲ್ಲೂ ಆಯಿಷಾ (ರ) ರ ವಯಸ್ಸಿನ ಪ್ರಸ್ತಾಪವಿಲ್ಲ. ಉಳಿದಂತೆ ವಿವಿಧ ಹದೀಸ್ ಗ್ರಂಥಗಳಲ್ಲಿ, ಸೀರತ್ ಗ್ರಂಥಗಳಲ್ಲಿ ಮತ್ತು ತಾರೀಕ್ ನ ಗ್ರಂಥಗಳಲ್ಲಿ ಈ ಕುರಿತು  ನೇರ ಹಾಗೂ ಪರೋಕ್ಷವಾಗಿ ಬಹಳ ಭಿನ್ನವಾದ ಮಾಹಿತಿಗಳು ಮತ್ತು ಸೂಚನೆಗಳು ಸಿಗುತ್ತವೆ. ವಿವಾಹದ ವೇಳೆ ಆಯಿಷರ ವಯಸ್ಸು 17 ವರ್ಷಕ್ಕಿಂತ ಅಧಿಕವಿತ್ತು ಎನ್ನುವ ವರದಿಗಳೂ ಅಲ್ಲಿ ಸಿಗುತ್ತವೆ. ನಾವು ಕುರುಡಾಗಿ ದೂಷಣೆ ಮಾತ್ರ ಮಾಡುತ್ತೇವೆ, ಸತ್ಯಾನ್ವೇಷಣೆ ಮಾಡುವುದೇ ಇಲ್ಲ ಎಂದು ತೀರ್ಮಾನಿಸಿ ಕೊಂಡವರು ಅವುಗಳನ್ನೆಲ್ಲ ಕಡೆಗಣಿಸಿ ಅಥವಾ ಅಡಗಿಸಿಟ್ಟು ಆರು ಮತ್ತು ಒಂಬತ್ತು ವರ್ಷಗಳ ಪ್ರಸ್ತಾಪ ವಿರುವ ವರದಿಗಳನ್ನು ಮಾತ್ರ ಚರ್ಚೆಗೆ ತರುತ್ತಾರೆ. 
2. ಪ್ರವಾದಿ ಮುಹಮ್ಮದ್ (ಸ) ಹುಟ್ಟಿ ಬೆಳೆದ ಸಮಾಜದಲ್ಲಿ ಅನೇಕ ಮೌಢ್ಯಗಳು, ಕಂದಾಚಾರಗಳು, ಕ್ರೂರ ಸಂಪ್ರದಾಯಗಳೆಲ್ಲಾ ಇದ್ದುವು. ಆದರೆ ಐದಾರು ವರ್ಷದ ಮಕ್ಕಳನ್ನು ವಿವಾಹವಾಗುವ ಸಂಪ್ರದಾಯ ಆ ಸಮಾಜದಲ್ಲಿ ಜನಪ್ರಿಯವಾಗಿರಲಿಲ್ಲ. ಆಗಿನ ಮಕ್ಕದಲ್ಲಿ ಆಯಿಷಾ ಎಂಬೊಬ್ಬ ಹೆಣ್ಣು ಮಗು ಮಾತ್ರ ಏಕಾಂಗಿಯಾಗಿ ಇದ್ದುದಲ್ಲ. ಅಲ್ಲಿ ಬೇರೆ ಸಾವಿರಾರು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಇದ್ದರು. ಅವರಲ್ಲಿ ಯಾರಿಗಾದರೂ ಆರನೇ ವಯಸ್ಸಿನಲ್ಲಿ ವಿವಾಹವಾಗಿತ್ತು ಎಂದು ಸೂಚಿಸುವ ಯಾವುದೇ ಹೇಳಿಕೆ ಹದೀಸ್ ಗ್ರಂಥಗಳಲ್ಲಾಗಲಿ ಇತಿಹಾಸದ ಗ್ರಂಥಗಳಲ್ಲಾಗಲಿ ಕಾಣ ಸಿಗುವುದಿಲ್ಲ. ಪ್ರವಾದಿ ಪುತ್ರಿ ಫಾತಿಮಾ ರ ವಿವಾಹವನ್ನೇ ಉದಾಹರಿಸುವುದಾದರೆ, ಆಕೆ ಪ್ರವಾದಿತ್ವದ ಘೋಷಣೆಯ ಐದು ವರ್ಷ ಮುಂಚೆ, ಅಂದರೆ, ಕಾಬಾದ ಪುನರ್ ನಿರ್ಮಾಣ ನಡೆದ ವರ್ಷದಲ್ಲಿ ಜನಿಸಿದ್ದರು ಮತ್ತು ಹಿಜ್ರತ್ ನ ಬಳಿಕ ಎರಡನೇ ವರ್ಷ ಅವರ ವಿವಾಹವಾಯಿತು. ಹಿಜ್ರತ್ ಅಥವಾ ವಲಸೆ ನಡೆದದ್ದು ಪ್ರವಾದಿತ್ವ ಘೋಷಣೆಯ 13  ವರ್ಷಗಳ ಬಳಿಕ. ಈ ದೃಷ್ಟಿಯಿಂದ ಫಾತಿಮಾರಿಗೆ ವಿವಾಹವಾಗುವಾಗ ಅವರಿಗೆ ಕನಿಷ್ಠ 20  ವರ್ಷ ವಯಸ್ಸಾಗಿರಬೇಕು. ಇನ್ನು ಸ್ವತಃ ಪ್ರವಾದಿವರ್ಯರ ವಿವಾಹಗಳನ್ನು ನೋಡಿದರೆ ಅಲ್ಲಿ ಬಾಲಿಕಾ ವಧುಗಳು ಅನ್ನಬಹುದಾದ ಯಾರೂ ಇಲ್ಲ. ಪ್ರವಾದಿಯ ಪ್ರಥಮ ವಿವಾಹ ನಡೆದಾಗ ಅವರಿಗೆ 25  ವರ್ಷ ವಯಸ್ಸಾಗಿತ್ತು. ಅವರ ಪ್ರಥಮ ಪತ್ನಿ ಖದೀಜಾರಿಗೆ ಆಗ 40  ವರ್ಷವಾಗಿತ್ತು. ಅವರ ಪತ್ನಿಯರಲ್ಲಿ ಹೆಚ್ಚಿನವರು ಒಂದೋ ವಿಧವೆಯರು ಅಥವಾ ವಿಚ್ಛೇದಿತೆಯರಾಗಿದ್ದರು. 
3.  ಪ್ರವಾದಿ ಮುಹಮ್ಮದ್ (ಸ)ರ ಸಮಕಾಲೀನ ವಿರೋಧಿಗಳು ಅವರ ಮೇಲೆ ಎಂತೆಂತಹದೋ ಘನಘೋರ ಆರೋಪಗಳನ್ನು ಹೊರಿಸಿದ್ದರು. ಆದರೆ ಆರು ವರ್ಷದ ಶಿಶುವನ್ನು ಮದುವೆಯಾದವರು ಅಥವಾ ಒಂಭತ್ತು ವರ್ಷದ ಮಗುವಿನ ಜೊತೆ ಸಂಸಾರ ನಡೆಸಿದವರು ಎಂಬ ಆರೋಪವನ್ನು ಅವರಲ್ಲಿನ ನೀಚಾತಿನೀಚ ಖಳನಾಯಕರು ಕೂಡಾ ಹೊರಿಸಿರಲಿಲ್ಲ. 
4. ಪ್ರವಾದಿ ಚರಿತ್ರೆಗೆ ಸಂಬಂಧಿಸಿದ ಘಟನೆಗಳ ಕಾಲ ನಿರ್ಣಯ ಮಾಡುವಾಗ ಅಥವಾ  ಆ ಕುರಿತು ಚರ್ಚಿಸುವಾಗ ಆ ಕಾಲ ಮತ್ತು ಆ ಸಮಾಜದಲ್ಲಿ   ಯಾವುದಾದರೂ ನಿರ್ದಿಷ್ಟ ಪಂಚಾಂಗವಾಗಲಿ ಕ್ಯಾಲೆಂಡರ್ ಆಗಲಿ ಚಲಾವಣೆಯಲ್ಲಿರಲಿಲ್ಲ ಎಂಬುದು ಗಮನದಲ್ಲಿರಬೇಕು. ಅಲ್ಲಿ ಸಾಮಾನ್ಯವಾಗಿ ಜನರು ನಿರ್ದಿಷ್ಟ ಕಾಲವನ್ನು ಸೂಚಿಸುವುದಕ್ಕೆ ಯಾವುದಾದರೂ ದೊಡ್ಡ ಘಟನೆ ನಡೆದ ವರ್ಷವನ್ನು ಹೆಸರಿಸಿ, ಆ ಘಟನೆ ನಡೆದು ಇಂತಿಷ್ಟು ವರ್ಷಗಳ ಬಳಿಕ ಅಥವಾ ಅದಕ್ಕಿಂತ ಇಂತಿಷ್ಟು ವರ್ಷ ಮುನ್ನ ಎಂದು ಹೇಳುತ್ತಿದ್ದರು. ಉದಾ: ಪ್ರವಾದಿ ಮುಹಮ್ಮದ್ (ಸ) ಯಾವ ವರ್ಷ ಜನಿಸಿದರೆಂಬ ಪ್ರಶ್ನೆಗೆ ಆ ಕಾಲದವರ ಉತ್ತರ – ‘ಆಮುಲ್ ಫೀಲ್’ ನಲ್ಲಿ ಜನಿಸಿದರು ಎಂದಿರುತ್ತಿತ್ತು. ಆಮುಲ್ ಫೀಲ್ ಅಂದರೆ ಆನೆಯ ವರ್ಷ. ಆ ವರ್ಷ ಯಮನ್ ದೇಶದ ಅಬ್ರಹಾ ಎಂಬ ದೊರೆ ತನ್ನ ಆನೆಗಳ ಸೇನೆಯೊಂದನ್ನು ತಂದು ಮಕ್ಕ ಪಟ್ಟಣದಲ್ಲಿದ್ದ ಪವಿತ್ರ ಕಾಬಾ ಆರಾಧನಾಲಯದ ಮೇಲೆ ದಾಳಿ ನಡೆಸಿದ್ದ. ಅದೊಂದು ನಿರ್ಣಾಯಕ ಘಟನೆಯಾದರೆ ಮುಹಮ್ಮದ್ (ಸ) ತಾವು ದೇವದೂತರೆಂದು ಘೋಷಿಸಿದ ವರ್ಷವು ಇನ್ನೊಂದು ನಿರ್ಣಾಯಕ ಘಟನೆ. ಮುಂದೆ ಪ್ರವಾದಿ ಮುಹಮ್ಮದ್ (ಸ) ಮಕ್ಕ ದಿಂದ ಮದೀನಾ ಗೆ ಹಿಜ್ರತ್ ಅಥವಾ ವಲಸೆ ಹೋದ ಘಟನೆ ಇನ್ನೊಂದು ಮೈಲುಗಲ್ಲು.  ಹಿಜ್ರತ್ ಗೆ ಮುಂಚೆ ಜನರು ಯಾವುದಾದರೂ ಘಟನೆಯ ಕಾಲವನ್ನು ಸೂಚಿಸುವುದಕ್ಕೆ ಪ್ರವಾದಿತ್ವ ಘೋಷಣೆಯ ವರ್ಷಕ್ಕಿಂತ ಇಂತಿಷ್ಟು ವರ್ಷಗಳ ಬಳಿಕ ಅಥವಾ ಮುನ್ನ ಎಂದು ಸೂಚಿಸುತ್ತಿದ್ದರು. ಹಿಜ್ರತ್ ನ ನಂತರ ಹೆಚ್ಚಿನವರು  ಕಾಲವನ್ನು  ಸೂಚಿಸುವಾಗ ಹಿಜ್ರತ್ ನಡೆದ ವರ್ಷಕ್ಕೆ ಜೋಡಿಸಿ ಸೂಚಿಸುತ್ತಿದ್ದರು. 
5. ಮೊದಲು ನಾವು, ಈ ವಿಷಯದಲ್ಲಿ ವಿವಾದಾತೀತವಾಗಿ ಎಲ್ಲರೂ ಅಂಗೀಕರಿಸುವ ಕೆಲವು ಅಂಶಗಳನ್ನು ಪ್ರಸ್ತಾಪಿಸಿ ಆ ಬಳಿಕ ವಿವಾದವಿರುವ ವಿಷಯಗಳೆಡೆಗೆ ಬಂದರೆ ಸಮಸ್ಯೆಯ ಇತ್ಯರ್ಥ ಸುಲಭವಾದೀತು. ಆಯಿಶಾರ ಜೊತೆ ಪ್ರವಾದಿವರ್ಯರ ವಿವಾಹ ನಡೆದದ್ದು, ಪ್ರವಾದಿತ್ವ ಘೋಷಣೆಯ ನಂತರದ 10 ನೇ ವರ್ಷದ ಶವ್ವಾಲ್ ತಿಂಗಳಲ್ಲಿ ಎಂಬ ಬಗ್ಗೆ ಯಾವುದೇ ವಿವಾದವಿಲ್ಲ. ಹಾಗೆಯೇ ವಿವಾಹವಾದ ಬಳಿಕವೂ ಆಯಿಷಾ ಬಹುಕಾಲ ತಮ್ಮ ತವರು ಮನೆಯಲ್ಲೇ ಉಳಿದಿದ್ದು, ಪ್ರವಾದಿವರ್ಯರು ಮಕ್ಕಾದಿಂದ ಮದೀನಾಗೆ ವಲಸೆ ಹೋದ ಬಳಿಕದ ಎರಡನೇ ವರ್ಷ ಶವ್ವಾಲ್ ತಿಂಗಳಲ್ಲಿ ಅಂದರೆ ಔಪಚಾರಿಕ ವಿವಾಹವಾಗಿ ಐದು ವರ್ಷಗಳ ಬಳಿಕ ಅವರು ಪ್ರವಾದಿಯ ಮನೆಯನ್ನು ಸೇರಿದರು ಎಂಬ ಬಗ್ಗೆಯೂ ಯಾವುದೇ ವಿವಾದವಿಲ್ಲ. ಆದ್ದರಿಂದ ಆಯಿಷಾ ಜನಿಸಿದ ವರ್ಷ ಯಾವುದು ಎಂಬ ಒಂದು ಪ್ರಶ್ನೆಗೆ ಉತ್ತರ ಸಿಕ್ಕಿದರೆ ಯಾವ ಹಂತದಲ್ಲಿ ಅವರು ಯಾವ ವಯಸ್ಸಿನವರಾಗಿದ್ದರೆಂದು ಕರಾರುವಾಕ್ಕಾಗಿ ಹೇಳಲು ಸಾಧ್ಯವಾಗುತ್ತದೆ. 
6. ವಿವಾಹದ ವೇಳೆ ಆಯಿಷಾರಿಗೆ ಆರು ವರ್ಷ ವಯಸ್ಸು ಎನ್ನುವವರು, ಆಯಿಷಾ ಜನಿಸಿದ್ದು ಪ್ರವಾದಿತ್ವದ ಘೋಷಣೆಯಾದ  ನಾಲ್ಕು ಅಥವಾ ಐದು ವರ್ಷಗಳ ನಂತರ ಎಂದು ನಂಬಿರುತ್ತಾರೆ. ನಿಜವಾಗಿ, ಆಯಿಷಾ ಪ್ರವಾದಿತ್ವದ ಘೋಷಣೆಗಿಂತ ನಾಲ್ಕೈದು ವರ್ಷ ಮೊದಲು ಜನಿಸಿದ್ದರೆಂದು ಸೂಚಿಸುವ ಹಲವಾರು  ಐತಿಹಾಸಿಕ ಪುರಾವೆಗಳಿದ್ದು, ಅವುಗಳನ್ನು ಗಣನೆಗೆ ತೆಗೆದು ಕೊಂಡರೆ, ವಿವಾಹದ ವೇಳೆ ಆಯಿಷಾರಿಗೆ ಕನಿಷ್ಠ 15 ವರ್ಷ ವಯಸ್ಸಾಗಿತ್ತು ಮತ್ತು ಅವರು ಪ್ರವಾದಿಯವರ ಮನೆಸೇರುವಾಗ ಅವರಿಗೆ ಕನಿಷ್ಠ 20 ವರ್ಷ ವಯಸ್ಸಾಗಿತ್ತು  ಎಂಬ ಬಗ್ಗೆ ಯಾವುದೇ ಸಂಶಯ ಉಳಿಯುವುದಿಲ್ಲ. 
7. ಇತಿಹಾಸಕಾರ ಇಬ್ನು ಸಅದ್ ತಮ್ಮ ‘ತಬಖಾತ್’  ಗ್ರಂಥದಲ್ಲಿ ನಿರೂಪಿರುವಂತೆ, ಆಯಿಷಾ (ರ) ರನ್ನು ವಿವಾಹವಾಗುವ ಅಪೇಕ್ಷೆ ಪ್ರಕಟಿಸುವ ಪ್ರವಾದಿ ಮುಹಮ್ಮದ್ (ಸ) ರ ವಿವಾಹ ಪ್ರಸ್ತಾವವು  ಆಯಿಷಾ (ರ) ರ ತಂದೆ ಅಬೂ ಬಕರ್ ಬಳಿಗೆ ತಲುಪಿದಾಗ ಇದ್ದ ಸನ್ನಿವೇಶ  ಮತ್ತು ಅವರು ಪ್ರಕಟಿಸಿದ ಪ್ರತಿಕ್ರಿಯೆ ಬಹಳ ಗಮನಾರ್ಹವಾಗಿದೆ. ಈಗಾಗಲೇ  ಜುಬೈರ್ ಬಿನ್ ಮುತ್ ಯಿಮ್ ಎಂಬ ವ್ಯಕ್ತಿಯ ಜೊತೆ ಆಯಿಷಾ ರ ವಿವಾಹ ನಿಶ್ಚಯವಾಗಿದೆ. ಆ ವಿಷಯವನ್ನು ಇತ್ಯರ್ಥ ಗೊಳಿಸಿದ ಬಳಿಕವಷ್ಟೇ ಪ್ರವಾದಿವರ್ಯರ ಪ್ರಸ್ತಾವವನ್ನು ಪರಿಗಣಿಸಲು ಸಾಧ್ಯ ಎಂಬುದು ಅಬೂ ಬಕರ್ ರ ಪ್ರತಿಕ್ರಿಯೆಯಾಗಿತ್ತು. ಇಲ್ಲಿ ಅಬೂ ಬಕರ್ ಅವರು ಪ್ರಸ್ತಾಪಿಸುತ್ತಿರುವ ಜುಬೈರ್ ಮತ್ತು ಆಯಿಶಾರ ನಡುವಣ ವಿವಾಹ ನಿಶ್ಚಿತಾರ್ಥವು ಕೇವಲ ಒಂದೆರಡು ವಾರ ಅಥವಾ ಒಂದೆರಡು ತಿಂಗಳ ಮುನ್ನ ನಡೆದ ಘಟನೆಯಾಗಿರಲಿಲ್ಲ ಎಂಬುದು ವ್ಯಕ್ತ. ನಿಜವಾಗಿ ಪ್ರವಾದಿಯ ಪ್ರಸ್ತಾವ ಹೋದಾಗ, ಅವರು ತಮ್ಮ ಪ್ರವಾದಿತ್ವವನ್ನು ಘೋಷಿಸಿ ಕನಿಷ್ಠ 10  ವರ್ಷಗಳು ಕಳೆದಿದ್ದವು. ಅವರು ಪ್ರವಾದಿತ್ವವನ್ನು ಘೋಷಿಸಿದ ವರ್ಷವೇ ಅವರ ಆಪ್ತ ಅಬೂ ಬಕರ್ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದರು. ಪ್ರವಾದಿತ್ವ ಘೋಷಣೆ ನಡೆದು ಕೆಲವು ವರ್ಷಗಳ ತನಕ ಸಮಾಜದಲ್ಲಿ ಪ್ರವಾದಿ, ಅವರ ಸಂದೇಶ ಮತ್ತು ಅವರ ಅನುಯಾಯಿಗಳ ವಿರುದ್ಧ ಪ್ರತಿರೋಧವು ಶೀತಲ ಸಮರದ ರೂಪದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಕ್ರಮೇಣ ಪ್ರವಾದಿ  ಮತ್ತವರ ಅನುಯಾಯಿಗಳ ವಿರುದ್ಧ ಪ್ರತಿರೋಧವು  ಬಹಿರಂಗ ವಿರೋಧದ, ಬಹಿಷ್ಕಾರದ  ಹಾಗೂ ಹಿಂಸೆಯ ರೂಪ ತಾಳಿತ್ತು. ಜುಬೈರ್ ಜೊತೆ ಆಯಿಷಾ ರ ವಿವಾಹ ನಿಶ್ಚಯವಾದ ದಿನಗಳು ಶೀತಲ ಸಮರದ ದಿನಗಳಾಗಿದ್ದವು. ಮುಂದೆ ಬಹಿರಂಗ ಸಂಘರ್ಷದ ಪರ್ವ ಆರಂಭವಾದಾಗ, ಜುಬೈರ್ ನ ಕುಟುಂಬದವರು ಪ್ರವಾದಿಯ ವಿರುದ್ಧದ ಪಕ್ಷದಲ್ಲಿದ್ದರು. ಆದ್ದರಿಂದ ಪ್ರವಾದಿಯ ಆಪ್ತರಾಗಿದ್ದ ಮತ್ತು ಸಂಪ್ರದಾಯ ಮುರಿದು ಮುಸ್ಲಿಮರಾಗಿದ್ದ ಅಬೂ ಬಕರ್ ರ ಪುತ್ರಿಯ ಜೊತೆ  ನಿಶ್ಚಯವಾಗಿದ್ದ ತಮ್ಮ ಹುಡುಗನ ವಿವಾಹ ನಡೆಯುವುದು ಜುಬೈರ್ ನ ಕುಟುಂಬದವರಿಗೆ ಇಷ್ಟವಿರಲಿಲ್ಲ. ಅಬೂಬಕರ್ ಕೂಡಾ ಆ ಸಂಬಂಧವನ್ನು ಮುಂದುವರಿಸುವುದರಲ್ಲಿ ಆಸಕ್ತರಾಗಿರಲಿಲ್ಲ. ಆದರೆ ಅಧಿಕೃತವಾಗಿ, ನಿಶ್ಚಿತ ವಿವಾಹವನ್ನು ಆಗಿನ್ನೂ ರದ್ದುಗೊಳಿಸಲಾಗಿರಲಿಲ್ಲ. ಈ ಸನ್ನಿವೇಶ ಏನನ್ನು ಸೂಚಿಸುತ್ತದೆ? ನಿಶ್ಚಿತ ವಿವಾಹವನ್ನು ರದ್ದುಗೊಳಿಸುವ ಔಪಚಾರಿಕತೆ ಚರ್ಚೆಗೆ ಬರುವ  ಕೆಲವು ವರ್ಷ ಮುನ್ನವಾದರೂ ವಿವಾಹ ನಿಶ್ಚಯ ವಾಗಿರಬೇಕಲ್ಲವೇ? ಆಯಿಷಾ ಆರು ವರ್ಷದವರಾಗಿದ್ದಾಗ ಪ್ರವಾದಿಯ ಜೊತೆ ಅವರ ವಿವಾಹವಾಗಿತ್ತು ಎನ್ನುವವರು, ಈ ಸನ್ನಿವೇಶದ ಬಗ್ಗೆ ಏನನ್ನುತ್ತಾರೆ? ಆಯಿಷಾ ಹುಟ್ಟುವ ಮುನ್ನವೇ ಜುಬೈರ್ ಜೊತೆ ಅವರ ವಿವಾಹ ನಿಶ್ಚಯವಾಗಿತ್ತೆಂದು ಹೇಳುವುದಿಲ್ಲ ತಾನೇ?  ನಿಜವಾಗಿ ಪ್ರವಾದಿಯ ಜೊತೆ ಆಯಿಷಾರ ವಿವಾಹ ನಡೆದಾಗ ಅವರು ಸಾಮಾನ್ಯ ವಿವಾಹದ ವಯಸ್ಸಿನವರಾಗಿದ್ದರು ಮತ್ತು ಕೇವಲ ಆರು ವರ್ಷದ ಬಾಲಕಿಯಂತೂ ಖಂಡಿತ ಆಗಿರಲಿಲ್ಲ ಎಂಬುದಕ್ಕೆ ಇದೊಂದು ಸ್ಪಷ್ಟ ಪುರಾವೆಯಾಗಿದೆ.    
8. ಪ್ರಖ್ಯಾತ ಇತಿಹಾಸಕಾರ ಮತ್ತು ಕುರ್ ಆನ್ ವ್ಯಾಖ್ಯಾನಕಾರ ಅಲ್ಲಾಮಾ ಇಬ್ನು ಕಸೀರ್ ಅವರ ಪ್ರಕಾರ ಆಯಿಷಾರಿಗಿಂತ 10 ವರ್ಷ ಹಿರಿಯರಾಗಿದ್ದ ಅವರ  ಅಕ್ಕ ಅಸ್ಮಾ ಬಿಂತಿ ಅಬೂಬಕರ್ ಹಿಜರಿ ಶಕ  73 ರಲ್ಲಿ ನಿಧನರಾದರು. ಆಗ ಅವರಿಗೆ ನೂರು ವರ್ಷವಯಸ್ಸಾಗಿತ್ತು.  ಈ ಪ್ರಕಾರ ಹಿಜ್ರತ್ ಅಥವಾ ವಲಸೆಯ ವೇಳೆ ಅವರಿಗೆ ಸುಮಾರು 27 ವರ್ಷ ವಯಸ್ಸಿರಬೇಕು ಮತ್ತು ಆಯಿಷಾರಿಗೆ ಕನಿಷ್ಠ  17 ವರ್ಷ ವಯಸ್ಸಿರಬೇಕು. ಔಪಚಾರಿಕ ವಿವಾಹವು ಹಿಜ್ರತ್ ಗಿಂತ ಮೂರು ವರ್ಷ ಮುನ್ನ ನಡೆದಿದ್ದರೆ ಆವೇಳೆ ಆಯಿಷಾರಿಗೆ ಕನಿಷ್ಠ 14 ವರ್ಷ ವಯಸ್ಸಾಗಿರಬೇಕು ಮತ್ತು ಐದು ವರ್ಷಗಳ ಬಳಿಕ ಅವರು ಪ್ರವಾದಿಯ ಕುಟುಂಬವನ್ನು ಸೇರುವಾಗ ಅವರಿಗೆ 19 ವರ್ಷ ವಯಸ್ಸಾಗಿರಬೇಕು. ಜಗದ್ವಿಖ್ಯಾತ ಹದೀಸ್ ಸಂಗ್ರಹ ಗ್ರಂಥ ಮಿಶ್ಕಾತ್ ಅಲ್ ಮಸಾಬೀಹ್ ನ ಕರ್ತೃ ಇಮಾಮ್ ವಲಿಯುದ್ದೀನ್ ಮುಹಮ್ಮದ್ ಇಬ್ನು ಅಬ್ದುಲ್ಲಾಹ್ ಅಲ್  ಖತೀಬ್ ಅವರು ಕೂಡಾ ಇದೇ ತರ್ಕವನ್ನು ಮಂಡಿಸಿದ್ದಾರೆ. 
9. ಪ್ರಸಿದ್ಧ ಇತಿಹಾಸಕಾರ ಇಬ್ನು ಜರೀರ್ ಅಲ್ ತಬರಿ ಅವರ ಪ್ರಕಾರ ಅಬೂ ಬಕರ್ ಅವರು ಇಸ್ಲಾಮ್ ಧರ್ಮ ಸ್ವೀಕರಿಸುವ ಮುನ್ನವೇ  ಅವರ ಮನೆಯಲ್ಲಿ ಆಯಿಷಾ ಮತ್ತು ಅಬ್ದುರಹ್ಮಾನ್ ಜನಿಸಿದ್ದರು. ಈ ಹೇಳಿಕೆಯನ್ನು ಸಮಥಿಸುವುದಕ್ಕೆ ಬೇರೆ ಮೂಲಗಳಿಂದಲೂ ಆಧಾರಗಳು ಸಿಗುತ್ತವೆ. ಹೀಗಿರುವಾಗ, ವಿವಾಹವಾಗುವಾಗ ಆಯಿಷಾರಿಗೆ ಆರು ವರ್ಷ ವಯಸ್ಸು ಎಂಬ ಒಂದು ತಪ್ಪು ಹೇಳಿಕೆಯನ್ನು ಸಮರ್ಥಿಸುವುದಕ್ಕಾಗಿ,  ಪ್ರವಾದಿತ್ವದ ಘೋಷಣೆಯಾಗಿ ಸುಮಾರು ಐದು ವರ್ಷ ಬಳಿಕ ಆಯೇಷಾ ಜನಿಸಿದರೆಂಬ ಇನ್ನೊಂದು ತಪ್ಪು ಹೇಳಿಕೆಯನ್ನು ಸೃಷ್ಟಿಸಿಕೊಂಡವರು ಪ್ರಾಮಾಣಿಕರಾಗಿದ್ದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಈ ಪುರಾವೆ ಪರ್ಯಾಪ್ತವಾಗಿದೆ. 
10. ಉಹುದ್ ಯುದ್ಧ ನಡೆದಾಗ, ಆಯಿಷಾ ಪ್ರವಾದಿಯ ಕುಟುಂಬವನ್ನು ಸೇರಿ ಸುಮಾರು ಒಂದು ವರ್ಷವಾಗಿತ್ತಷ್ಟೆ. ಆ ಯುದ್ಧದಲ್ಲಿ ಆಯಿಷಾ ಪ್ರವಾದಿವರ್ಯರ ಸೈನ್ಯದಲ್ಲಿ ಸಕ್ರಿಯ ಸಹಾಯಕಿಯ ಪಾತ್ರ ವಹಿಸಿದ್ದರು. ಅವರು ತಮ್ಮ ಕೆಲವು ಮಹಿಳಾ ಸಂಗಾತಿಗಳ ಜೊತೆ, ಬೆನ್ನ ಮೇಲೆ ನೀರಿನ ಚೀಲಗಳನ್ನು ಹೊತ್ತುಕೊಂಡು ಯುದ್ಧದಲ್ಲಿ ಗಾಯಾಳುಗಳಾದವರಿಗೆ ನೀರು ಕುಡಿಸುವ ಸೇವೆಯಲ್ಲಿ ತೊಡಗಿದ್ದರೆಂಬುದನ್ನು  ಅನೇಕ ಇತಿಹಾಸಕಾರರು ದಾಖಲಿಸಿದ್ದಾರೆ. ಆಯಿಷಾ ಪ್ರವಾದಿಯ ಮನೆ ಸೇರಿದಾಗ ಕೇವಲ  ಹದಿಹರೆಯದ ಬಾಲಕಿಯಾಗಿರಲಿಲ್ಲ ಎಂಬುದಕ್ಕೆ ಇದೊಂದು ಪರೋಕ್ಷ ಪುರಾವೆಯಾಗಿದೆ, ಏಕೆಂದರೆ ಪ್ರವಾದಿವರ್ಯರು ಕಿರಿಯ ವಯಸ್ಸಿನ ಯಾರನ್ನೂ ಯುದ್ಧ ರಂಗದ ಹತ್ತಿರ ಸುಳಿಯಲು  ಬಿಡುತ್ತಿರಲಿಲ್ಲ. ಹದಿಹರೆಯದ ಕೆಲವು ಯುವಕರು ಯುದ್ಧದ ಸಂದರ್ಭದಲ್ಲಿ ಪ್ರವಾದಿಯ ಸೇನೆಯನ್ನು ಸೇರಲು ಅಪೇಕ್ಷಿಸಿದಾಗ ಪ್ರವಾದಿವರ್ಯರು ಅವರನ್ನು ತಮ್ಮ ಸೇನೆಗೆ ಸೇರಿಸುವ ಬದಲು ಹಾಗೆಯೇ ಮರಳಿಸಿ ಬಿಟ್ಟಿದ್ದರು. ಈ ರೀತಿ ತಮ್ಮ ಕಟ್ಟುನಿಟ್ಟಿನ ಯುದ್ಧ ಸಂಹಿತೆಯನುಸಾರ ಹದಿಹರೆಯದ ತರುಣರನ್ನು ಯುದ್ಧರಂಗದಿಂದ ದೂರವಿಟ್ಟ ಪ್ರವಾದಿ, ಆಯಿಷಾರಂತಹ ಮಹಿಳೆಯನ್ನು ಯುದ್ಧರಂಗದಲ್ಲಿ ಯೋಧರ ನೆರವಿಗೆ ನಿಯೋಜಿಸಿದ್ದರೆ, ಆಗ ಆಕೆ 20  ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಲು ಸಾಧ್ಯವಿಲ್ಲ ಎಂಬ ತರ್ಕ ಸಹಜವಲ್ಲವೇ?  
ಪ್ರವಾದಿ ಮುಹಮ್ಮದ್ (ಸ) ಅವರ ಕಾಲದಲ್ಲಿ ಅಂದರೆ ಕ್ರಿ.ಶ. ಏಳನೇ ಶತಮಾನದಲ್ಲಿ  ಬಾಲ್ಯವಿವಾಹವಿತ್ತೆಂದು ಸಾಬೀತು ಪಡಿಸಲು ಹೆಣಗಾಡುತ್ತಿರುವವರು ಇಪ್ಪತ್ತೊಂದನೇ ಶತಮಾನದಲ್ಲಿ ಸ್ವತಃ ನಮ್ಮ ಭಾರತ ದೇಶದಲ್ಲಿ  ಎಂತಹ ಪರಿಸ್ಥಿತಿ  ಇದೆ  ಎಂಬುದನ್ನೊಮ್ಮೆ ನೋಡಿಕೊಳ್ಳುವುದು ಲೇಸು. 
ವಿಶ್ವ ಸಂಸ್ಥೆಯ ಅಂಗವಾಗಿರುವ UNICEF ನವರ ಇತ್ತೀಚಿನ  ವರದಿ ಪ್ರಕಾರ  ಜಗತ್ತಿನಲ್ಲಿ ಅತ್ಯಧಿಕ ಬಾಲ್ಯ ವಿವಾಹಗಳು ನಡೆಯುವ ದೇಶಗಳ  ಸಾಲಲ್ಲಿ ನಮ್ಮ ಭಾರತ  ಮುಂಚೂಣಿಯಲ್ಲಿದೆ.  ಇಲ್ಲಿ ವಿವಾಹವಾಗುವ ಹೆಣ್ಣು ಮಕ್ಕಳಲ್ಲಿ 27% ಮಂದಿ 18 ವರ್ಷ ಮುನ್ನವೇ ಹಸೆ ಮಣೆ ಹತ್ತುತ್ತಾರೆ. ಬಿಹಾರ ಮತ್ತು ರಾಜಸ್ತಾನಗಳಂತಹ ರಾಜ್ಯಗಳಲ್ಲಿ ಇಂತಹ ಬಾಲಿಕಾ ವಧುಗಳ ಸಂಖ್ಯೆ 65% ದಿಂದ  69% ದಷ್ಟಿದೆ. ಇಂತಹ ಸಮಾಜದಲ್ಲಿ ಗೌರವಾನ್ವಿತ ಧಾರ್ಮಿಕ ವ್ಯಕ್ತಿಗಳನ್ನು ಹೆಸರಿಸಿ ಅವರು ಆರು ವರ್ಷದ ಹೆಣ್ಣನ್ನು ವಿವಾಹವಾದರು ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿರುವವರ ಉದ್ದೇಶ ಒಳ್ಳೆಯದಿರಲು ಸಾಧ್ಯವೇ? 
11. ಆರು ವರ್ಷ ವಯಸ್ಸಿನಲ್ಲಿ ಆಯಿಶಾರ ವಿವಾಹವಾಯಿತು ಮತ್ತು ಒಂಭತ್ತರ  ಹರೆಯದಲ್ಲಿ ಅವರು ಪ್ರವಾದಿಯ  ಮನೆ ಸೇರಿದರು ಎಂಬ ‘6 / 9 ಕಥೆ’ ಸತ್ಯವೆಂದು ವಾದಿಸುವವರು ಮತ್ತು ಪ್ರತಿ ಸಲವೂ ನವನೂತನ ಸಂಶೋಧನೆಯೋ ಎಂಬಂತೆ ಅದನ್ನು ಉತ್ಸಾಹದಿಂದ ಪುನರಾವರ್ತಿಸುತ್ತಿರುವವರು ಬಳಸುವ ಅತಿದೊಡ್ಡ ಅಸ್ತ್ರ – ಆ ಕಥೆ ಬುಖಾರಿಯಲ್ಲಿದೆ ಎಂಬುದು. ಇಮಾಮ್ ಬುಖಾರಿ (ರ) ಮತ್ತವರ ಹದೀಸ್ ಸಂಗ್ರಹ ಗ್ರಂಥ (ಸಹೀಹ್ ಅಲ್  ಬುಖಾರಿ)ಕ್ಕೆ ಮುಸ್ಲಿಂ ಸಮಾಜದಲ್ಲಿ ವ್ಯಾಪಕ ಗೌರವ ಮತ್ತು ಮಾನ್ಯತೆ ಇರುವುದು ನಿಜ. ಹದೀಸ್ ಸಂಗ್ರಹ ಪ್ರಕ್ರಿಯೆಯಲ್ಲಿ ಸಂಶೋಧನೆ ಮತ್ತು ನಿಷ್ಕರ್ಷೆಯ ಹೊಸ ವಿಧಾನ ಮತ್ತು ಮಾನದಂಡಗಳನ್ನು ಪರಿಚಯಿಸಿದ ಇಮಾಮ್ ಬುಖಾರಿ ನಿಜಕ್ಕೂ ಅಪಾರ ಗೌರವಕ್ಕೆ ಅರ್ಹರು.  ”ಅಸಹ್ಹುಲ್ ಕುತುಬಿ ಬಅದ ಕಿತಾಬುಲ್ಲಾಹ್” (ಅಲ್ಲಾಹನ ಗ್ರಂಥ ಅಂದರೆ ಕುರ್ ಆನ್ ನ ಬಳಿಕ ಅತ್ಯಂತ ವಿಶ್ವಾಸಾರ್ಹ ಗ್ರಂಥ) ಎಂದು ಅವರ ಗ್ರಂಥವನ್ನು ವೈಭವೀಕರಿಸಲಾಗಿದೆ. ಒಂದು ವರದಿ ಬುಖಾರಿಯವರ ಗ್ರಂಥದಲ್ಲಿದ್ದರೆ ಅದರ ವಿಶ್ವಾಸಾರ್ಹತೆಗೆ ಬೇರೆ ಪುರಾವೆ ಬೇಕಿಲ್ಲ ಎಂಬ ನಿಲುವಿನವರೂ ಸಮುದಾಯದಲ್ಲಿದ್ದಾರೆ. ಆದರೆ ಉತ್ಪ್ರೇಕ್ಷೆಗಳನ್ನು ಬದಿಗಿಟ್ಟು  ವಸ್ತುನಿಷ್ಠವಾಗಿ ನೋಡಿದರೆ, ಬುಖಾರಿಯವರ ಗ್ರಂಥ ದಿವ್ಯಗ್ರಂಥವೇನೂ ಅಲ್ಲ. ಆದ್ದರಿಂದ ಅದರಲ್ಲಿ ತಪ್ಪುಗಳಿರುವ ಸಾಧ್ಯತೆ ಇದೆ ಎಂಬುದನ್ನು  ಬುಖಾರಿಯವರ ಕಟ್ಟಾ ಅಭಿಮಾನಿಗಳೂ ನಿರಾಕರಿಸುವುದಿಲ್ಲ. ಬುಖಾರಿಯವರನ್ನು ವೈಭವೀಕರಿಸುವ ಎಷ್ಟೋ ಮಂದಿ, ಕಾನೂನು, ಕರ್ಮಶಾಸ್ತ್ರ ಇತ್ಯಾದಿ ಅನೇಕ ವಿಷಯಗಳಲ್ಲಿ ಬುಖಾರಿಯವರಿಗಿಂತ ಭಿನ್ನ ನಿಲುವನ್ನು ತಾಳಿರುತ್ತಾರೆ. ಇದಕ್ಕೆ ಕಾರಣವಿದೆ.   ಇಮಾಮ್ ಬುಖಾರಿ ಜನಿಸಿದ್ದು ಹಿಜರಿ 194 ರಲ್ಲಿ. ಅವರ ಗ್ರಂಥ ಸಹೀಹ್ ಅಲ್ ಬುಖಾರಿಯ ರಚನೆ ಪೂರ್ತಿಯಾಗಿದ್ದು ಹಿಜರಿ 232 ರಲ್ಲಿ ಅಂದರೆ ಹಿಜರಿ ಮೂರನೇ ಶತಮಾನದಲ್ಲಿ. ನಾಲ್ಕು ಕರ್ಮಶಾಸ್ತ್ರ ಪಂಥಗಳ ತೀರ್ಪುಗಳ ಪೈಕಿ ಹೆಚ್ಚಿನ ತೀರ್ಪುಗಳು ಇಮಾಮ್ ಬುಖಾರಿಯ ಗ್ರಂಥ ಪ್ರಕಟವಾಗುವ ಹಲವು ವರ್ಷಗಳ ಮುನ್ನವೇ ಸಾದರವಾಗಿದ್ದರಿಂದ ಆ ತೀರ್ಪುಗಳಿಗೆ ಕಾರಣವಾದ ಆಧಾರಗಳು ಮತ್ತು ಅದಕ್ಕಾಗಿ ಅವಲಂಬಿಸಲಾದ ಮಾಹಿತಿ ಮೂಲಗಳು ಪ್ರವಾದಿಯ ಕಾಲಕ್ಕೆ ಹೆಚ್ಚು ನಿಕಟವೆಂಬ ನೆಲೆಯಲ್ಲಿ ಹೆಚ್ಚು ಅವಲಂಬನೀಯ ಎಂದು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಒಂದು ಮಾಹಿತಿ ಬುಖಾರಿಯವರ ಗ್ರಂಥದಲ್ಲಿದೆ ಅಥವಾ ಅದು ಮೂರು ಅಥವಾ ನಾಲ್ಕು ಇತರ ಗ್ರಂಥಗಳಲ್ಲಿ ಪ್ರಸ್ತಾಪಿಸಲ್ಪಟ್ಟಿದೆ  ಎಂಬ ಒಂದೇ ಕಾರಣಕ್ಕಾಗಿ ಅದನ್ನು ಪ್ರಶ್ನಾತೀತವಾಗಿ ಸ್ವೀಕರಿಸಬೇಕೆಂಬ ಯಾವ ನಿರ್ಬಂಧವೂ ಇಲ್ಲ.  
ಆಯಿಷಾ ರ ಜೊತೆ ಪ್ರವಾದಿ ಮುಹಮ್ಮದರು (ಸ)  ಮಾಡಿಕೊಂಡ ವಿವಾಹದಲ್ಲಿ ಹುಳುಕು ಹುಡುಕುವವರು ಮೊದಲು 6 / 9 ರ ತರ್ಕ ತಂದು, ಅದನ್ನು ಬಾಲ್ಯ ವಿವಾಹವೆಂದು ಕರೆದು ಆಯಿಶಾರ ಪರ ಅನುಕಂಪ ಮತ್ತು ಪ್ರವಾದಿಯ ವಿರುದ್ಧ ರೋಷ ಪ್ರಕಟಿಸುತ್ತಾರೆ. 6 / 9 ರ ತರ್ಕ ಐತಿಹಾಸಿಕವಾಗಿಯೂ ತಾರ್ಕಿಕವಾಗಿಯೂ ತಪ್ಪು ಎಂದು ಸ್ಪಷ್ಟವಾಗಿ ಸಾಬೀತಾದಾಗ, ಅವರಿಬ್ಬರ ಮಧ್ಯೆ ವಯಸ್ಸಿನ ವ್ಯತ್ಯಾಸ ಬಹಳಷ್ಟಿತ್ತು ಎಂಬ ಕೊನೆಯ ಅಸ್ತ್ರ ಬಳಸುತ್ತಾರೆ. ನಿಜವಾಗಿ  ಮದುವೆಯಾಗುವ ಹೆಣ್ಣು ಮತ್ತು ಗಂಡಿನ ನಡುವೆ ಇಂತಿಷ್ಟು ವರ್ಷಗಳ ಅಂತರ ಮಾತ್ರ ಇರಬೇಕು ಎಂಬ ಕಾನೂನು ಜಗತ್ತಿನ ಯಾವ ಸಮಾಜದಲ್ಲೂ ಇಂದು ಜಾರಿಯಲ್ಲಿಲ್ಲ, ಹಿಂದೆಂದೂ ಜಾರಿಯಲ್ಲಿರಲಿಲ್ಲ. ವಿವಾಹ ಎಂಬುದು ಜಗತ್ತಿನ ಎಲ್ಲ ವಿಭಿನ್ನ ಭಾಗಗಳಲ್ಲಿ, ಎಲ್ಲ ಕಾಲಗಳಲ್ಲಿ,  ತೀರಾ ವಿಭಿನ್ನಹಿನ್ನೆಲೆಯ ವ್ಯಕ್ತಿಗಳ ನಡುವೆ, ತೀರಾ ವಿಭಿನ್ನವಾದ ಸನ್ನಿವೇಶಗಳಲ್ಲಿ, ಪರಸ್ಪರ ಸಮ್ಮತಿಯೊಂದಿಗೆ  ನಡೆಯುವ ಒಡಂಬಡಿಕೆಯಾದ್ದರಿಂದ ಅವರಿಬ್ಬರು ಸಮವಯಸ್ಕ ರಾಗಿರಬೇಕು ಅಥವಾ ವಯಸ್ಸಿನಲ್ಲಿ ಅವರ ಮಧ್ಯೆ ಇಂತಿಷ್ಟು ಅಂತರ ಮಾತ್ರ ಇರಬೇಕು ಎಂದಿತ್ಯಾದಿಯಾಗಿ ಕಾನೂನುಗಳನ್ನು ನಿರ್ಮಿಸಬೇಕೆಂದು ಆಗ್ರಹಿಸುವುದು ಹುಚ್ಚುತನವೆನಿಸುತ್ತದೆ. ಆದ್ದರಿಂದಲೇ ಯಾರೂ ಎಲ್ಲೂ ಅಂತಹ ಕಾನೂನನ್ನು ಮಾಡಿಲ್ಲ. 
ತಮಗಿಂತ ಹಲವು ವರ್ಷ ಹಿರಿಯರಾಗಿದ್ದ ಪ್ರವಾದಿಯನ್ನು ವಿವಾಹವಾದ ಆಯಿಷಾ ಯಾವುದಾದರೂ ವಿಧದಲ್ಲಿ ಬಲಿ ಪಶುವಾಗಿದ್ದರೇ? ಸಂತ್ರಸ್ತರಾಗಿದ್ದರೆ? ಅವರು ದುಃಖ ದುಮ್ಮಾನದ ಬದುಕು ಸಾಗಿಸಬೇಕಾಯಿತೇ? ವಿವಾಹದಿಂದಾಗಿ ಅವರ ಬದುಕು ಹಾಳಾಯಿತೇ? ಅಪಪ್ರಚಾರಗಳಿಂದ ಪ್ರೇರಿತವಾದ ಈ ಬಗೆಯ ಪ್ರಶ್ನೆಗಳಿಗೆ ಉತ್ತರ ಪಡೆಯಲು ನಾವು ಆಯಿಶಾರ ಬದುಕನ್ನೊಮ್ಮೆ ನೋಡಿದರೆ ಸಾಕು. ಅವರದು ಅಜ್ಞಾತ ಬದುಕಲ್ಲ. ಅವರು ಯಾವುದಾದ್ರೂ ಭದ್ರ ಕೋಟೆಯಲ್ಲಿ ಅಥವಾ ಯಾವುದಾದರೂ ಅರಮನೆಯ ಮೂಲೆಯಲ್ಲಿ ಕಾವಲು ಭಟರ ರಕ್ಷಣೆಯಲ್ಲಿ ನಿಗೂಢವಾಗಿ ಬದುಕಿದ್ದವರಲ್ಲ. ಅವರು ಸಮಾಜದಲ್ಲಿ ಎಲ್ಲ ಬಗೆಯ ಜನರ ಜೊತೆ ಬೆರೆತು, ಸಕ್ರಿಯ ಬದುಕು ಸಾಗಿಸಿದವರು. ಶಿಕ್ಷಕಿ ಹಾಗೂ ಮಾರ್ಗದರ್ಶಿಯಾಗಿ ಎಲ್ಲರಿಗೆ ಲಭ್ಯವಿದ್ದವರು. ಪ್ರವಾದಿಯ ನಿಧನಾನಂತರವೂ ಸುಮಾರು ಐದು ದಶಕಗಳ ಕಾಲ ಅವರು ಬದುಕಿದ್ದರು.  ಈ ಅವಧಿಯಲ್ಲಿ ಸಾವಿರಾರು ಜನರ ಜೊತೆ ಸಾವಿರಾರು ಸಂದರ್ಭಗಳಲ್ಲಿ ಅವರು ಪ್ರವಾದಿವರ್ಯರ ಕುರಿತು ಮಾತನಾಡಿದ್ದಾರೆ. ಪ್ರವಾದಿವರ್ಯರ ಕುರಿತು ಕೇಳಲಾದ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ  ಮಧ್ಯೆ ಅವರು, ತಮ್ಮ ಕೆಲವು ಸವತಿಯರ ಜೊತೆ ನಡೆದಿದ್ದ ಸಣ್ಣ ಪುಟ್ಟ ಜಗಳಗಳನ್ನು ನೆನಪಿಸಿಕೊಂಡದ್ದುಂಟು. ತಮ್ಮ ವಿರುದ್ಧ ಘೋರ ಅಪಪ್ರಚಾರ ಮಾಡಿದವರನ್ನು ಸ್ಮರಿಸಿದ್ದುಂಟು.  ಆದರೆ ಪ್ರವಾದಿವರ್ಯರ ಬಗ್ಗೆ ಕಿಂಚಿತ್ತಾದರೂ ಅತೃಪ್ತಿಯನ್ನು ಪ್ರಕಟಿಸುವ ಒಂದೇ ಒಂದು ಮಾತನ್ನು ಕೂಡಾ ಅವರೆಂದೂ ಆಡಿದ್ದಿಲ್ಲ.  ಅವರ ಮಾತುಗಳಲ್ಲಿ ಪ್ರವಾದಿವರ್ಯರ ಕುರಿತು ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವದ ಹೊರತು ಬೇರೇನೂ ಪ್ರಕಟವಾದದ್ದಿಲ್ಲ. 
ವಿವಾಹ ಪೂರ್ವದಲ್ಲೂ ಆಯಿಶಾ ಅನಾಥೆಯಾಗಿರಲಿಲ್ಲ. ಆಕೆ ಮಕ್ಕಾದ ಒಂದು ಗೌರವಾನ್ವಿತ ಮನೆತನದ, ಸ್ಥಿತಿವಂತ ಕುಟುಂಬದ ಸದಸ್ಯೆಯಾಗಿದ್ದರು. ಅವರ ವಿವಾಹವು ಬಲವಂತದ ವಿವಾಹವಾಗಿರಲಿಲ್ಲ. ಅವರ ವಿವಾಹವು ಸ್ವತಃ ಅವರ ಸಮ್ಮತಿಯೊಂದಿಗೆ, ಅವರನ್ನು ಬಹಳಷ್ಟು ಪ್ರೀತಿಸುತ್ತಿದ್ದ ಅವರ ಹೆತ್ತವರ ಸಮ್ಮುಖದಲ್ಲಿ, ಅವರ  ಅಪೇಕ್ಷೆಯಂತೆ, ಅವರ ಷರತ್ತುಗಳ ಅನ್ವಯ ನಡೆದಿತ್ತು.  ಹೆಣ್ಣಿನ ಸಮ್ಮತಿ ಇಲ್ಲದೆ ನಡೆಯುವ ವಿವಾಹವು ಸಿಂಧುವಲ್ಲ ಎಂಬ ನಿಯಮವನ್ನು ಸಮಾಜದಲ್ಲಿ ಜಾರಿಗೊಳಿಸಿದ ವ್ಯಕ್ತಿಯೇ ಸಾಕ್ಷಾತ್ ಆಯಿಶಾರ ಪತಿಯಾಗಿದ್ದರು. ಆದ್ದರಿಂದ ಅಲ್ಲಿ ಆಕೆಯ ಸಮ್ಮತಿ ಪಡೆಯದೇ ಬಲವಂತದ ವಿವಾಹ ನಡೆದಿರುವ ಸಾಧ್ಯತೆ ಎಳ್ಳಷ್ಟೂ ಇಲ್ಲ.   
ಮುಸ್ಲಿಮ್  ಇತಿಹಾಸದಲ್ಲಿ ಹಜ್ರತ್ ಆಯಿಶಾರ ವ್ಯಕ್ತಿತ್ವಕ್ಕೆ ಅಸಾಮಾನ್ಯ ಮಹತ್ವವಿದೆ. ಆಕೆ ಪ್ರವಾದಿವರ್ಯರ ಜೊತೆ ಅವರ ಕುಟುಂಬದ ಸದಸ್ಯೆಯಾಗಿ ಅವರ ಬದುಕಿನ ಕೊನೆಯ ಎಂಟು ವರ್ಷಗಳ ಅವಧಿಯಲ್ಲಿ  ರಾತ್ರಿ ಹಗಲೆನ್ನದೆ ಅವರ ಜೊತೆಗಿದ್ದವರು. ಸಾಮಾನ್ಯ ದಿನಗಳಲ್ಲಿ ಮಾತ್ರವಲ್ಲ ಯುದ್ಧ ರಂಗಗಳಲ್ಲೂ ಅವರು ಪ್ರವಾದಿಯ ಜೊತೆಗಿರುತ್ತಿದ್ದರು. ಯುದ್ಧಗಳಲ್ಲಿ ಸ್ವಯಂಸೇವಕಿಯಾಗಿ  ಸೇವೆ ಸಲ್ಲಿಸಿದ್ದರು. ಪ್ರವಾದಿವರ್ಯರ ನಿಧನಾನಂತರ ಅವರು ಮುಸ್ಲಮ್ ಸಮಾಜದ ಪಾಲಿಗೆ ಶಿಕ್ಷಕಿ ಹಾಗೂ ಮಾರ್ಗದರ್ಶಿಯಾಗಿದ್ದರು. ವಿವಿಧ ವಿಷಯಗಳಲ್ಲಿ ಪ್ರವಾದಿಯವರ ನಿಲುವು ಏನಾಗಿತ್ತು ಅಥವಾ ಅವರು ಆ ಕುರಿತು ಏನು ಹೇಳಿದ್ದರು ಎಂಬುದನ್ನು ಅರಿಯಲು ಊರವರು ಮಾತ್ರವಲ್ಲ, ದೂರ ದೂರದ ದೇಶಗಳ ಜನರು ಆಯಿಶಾರ ಬಳಿಗೆ ಬರುತ್ತಿದ್ದರು. 2,200ಕ್ಕೂ ಅಧಿಕ ಹದೀಸ್ ಗಳನ್ನು ವರದಿ ಮಾಡಿರುವ ಆಯಿಷಾ ಅತ್ಯಧಿಕ ಹದೀಸ್ ಗಳನ್ನು ವರದಿ ಮಾಡಿದವರ ಸಾಲಲ್ಲಿ ನಾಲ್ಕನೆಯ ಸ್ಥಾನದಲ್ಲಿದ್ದಾರೆ. ಇನ್ನು ಮಹಿಳೆಯರ ಪೈಕಿ ಅತ್ಯಧಿಕ ಹದೀಸ್ ಗಳನ್ನು ವರದಿ ಮಾಡಿದವರಲ್ಲಿ ಮೊದಲ ಸ್ಥಾನ ಅವರಿಗೆ ಸಲ್ಲುತ್ತದೆ. ಇತರರು ವರದಿ ಮಾಡಿದ ಯಾವುದಾದರೂ ಹದೀಸ್ ಕುರಿತು ಸಂದೇಹಗಳಿದ್ದರೆ ಸಂದೇಹ ನಿವಾರಣೆಗಾಗಿ ಜನರು ಆಯಿಷಾ ರ ಬಳಿಗೆ ಹೋಗುತ್ತಿದ್ದರು. ಅವರು ಕುರ್ ಆನನ್ನು ಸಂಪೂರ್ಣ ಕಂಠ ಪಾಠ ಮಾಡಿದ ‘ಹಾಫಿಝ’ ಆಗಿದ್ದರು. ತಮ್ಮ ಅಪಾರ ವಿದ್ವತ್ತು, ಜಾಣ ಮಾತುಗಾರಿಕೆ ಹಾಗೂ ಪ್ರೌಢ ಬುದ್ಧಿಮತ್ತೆಗಾಗಿ ಖ್ಯಾತರಾಗಿದ್ದ ಆಯಿಷಾ (ರ)  ಅವರು ಪ್ರವಾದಿಯ ಪಾಲಿಗೆ ಪತ್ನಿ ಮಾತ್ರ ಅಲ್ಲ ಆಪ್ತ ಸಂಗಾತಿ ಹಾಗೂ  ಸಲಹೆಗಾರ್ತಿಯೂ ಆಗಿದ್ದರು. ಎಷ್ಟೋ ಸಂದಿಗ್ಧ ಸಂದರ್ಭಗಳಲ್ಲಿ ಪ್ರವಾದಿ (ಸ) ಆಯಿಷಾರ ಜೊತೆ ಸಮಾಲೋಚಿಸಿದ್ದುಂಟು,  ಹಾಗೆಯೇ ಆಕೆಯ ಸಲಹೆಯನ್ನು ಅನುಸರಿಸಿದ್ದುಂಟು. 
ಮುಕ್ತತೆ, ಸ್ವಾಭಿಮಾನ, ಆತ್ಮ ಗೌರವ, ನೇರ – ನಿಷ್ಠುರ ಮಾತು, ಔದಾರ್ಯ, ದಿಟ್ಟತನ ಇವೆಲ್ಲಾ ಆಯಿಷಾ ರ ವ್ಯಕ್ತಿತ್ವದ ವೈಶಿಷ್ಟ್ಯ ಗಳಾಗಿದ್ದವು.  ತಮ್ಮ ಬದುಕಿನ ಯಾವ ಹಂತದಲ್ಲೂ ಆಯಿಷಾ ಮಾನಸಿಕ ದಾಸ್ಯಕ್ಕೆ ತುತ್ತಾಗಿರಲಿಲ್ಲ. ಅವರು ಎಂದೂ ನಿಷ್ಕ್ರಿಯ ರಾಗಿರಲಿಲ್ಲ. ಪ್ರವಾದಿವರ್ಯರ ಸಂಗ ಮತ್ತು ಒಡನಾಟದಲ್ಲಿ ಅವರ ವ್ಯಕ್ತಿತ್ವ ಅರಳಿತ್ತು, ಬೆಳಗಿತ್ತು.  ನಾಲ್ಕನೆಯ ಖಲೀಫಾ ಹಜ್ರತ್ ಅಲಿ (ರ) ಅವರ ಆಡಳಿತದ ಕಾಲದಲ್ಲಿ ಅಲಿ ಅವರ ಜೊತೆ ಭಿನ್ನಮತ ಉಂಟಾದಾಗ, ಕಾಲದ ಆಡಳಿತಗಾರನ ವಿರುದ್ಧವೇ  ಸೇನೆ ಕಟ್ಟಿ ಯುದ್ಧಕ್ಕೆ ಹೊರಟವರು ಅವರು.  ಅಂತಹ ಆಯಿಷಾ ರನ್ನು ಕುರಿ ಮರಿ ಎಂಬಂತೆ  ಚಿತ್ರಿಸುವವರನ್ನು ಏನನ್ನೋಣ?