-ರೂಹೀ, ಪುತ್ತಿಗೆ
ತನ್ನ ಹಿಂಸಾತ್ಮಕ ಅಪರಾಧಿ ಚಟುವಟಿಕೆಗಳಿಗಾಗಿ ಹಲವು ಬಾರಿ ಸುದ್ದಿಯಾಗಿದ್ದ ಸಿಟಿ ರವಿ ಎಂಬ ಹತಾಶ ಪುಡಾರಿಯೊಬ್ಬರು ಇತ್ತೀಚಿಗೆ ಯಾರೋ ತನಗೆ ಬರೆದು ಕೊಟ್ಟ ಕೆಲವು ವಾಕ್ಯಗಳನ್ನುಓದಿ ಇವೆಲ್ಲಾ ಕುರ್ ಆನ್ ಗ್ರಂಥದ ವಚನಗಳೆಂದು ಆರೋಪಿಸಿದರು. ಜಗತ್ತಿನಲ್ಲಿ ನಡೆಯುವ ಎಲ್ಲ ಹಿಂಸಾಚಾರಗಳಿಗೆ ಕುರ್ ಆನ್ ಕಾರಣ ಎಂಬಂತೆ ಅವರು ಮಾತನಾಡಿದ್ದರು. https://www.youtube.com/watch?v=cww5p4Th3M8 ಟಿವಿಯಲ್ಲಿ ಅವರ ಭಾಷಣ ಅಥವಾ ಒದರಾಟ ಕೇಳಿದ ಶ್ರೀಮದ್ ಭಗವದ್ಗೀತೆಯ ಅಭಿಮಾನಿಯೊಬ್ಬರು, ಇಂತಹ ಅಪ್ರಾಮಾಣಿಕ ಅಜ್ಞಾನಿಯ ಕೈಗೆ ಒಂದುವೇಳೆ ಕುರ್ ಆನ್ ಬದಲಿಗೆ ಭಗವದ್ಗೀತೆ ಸಿಕ್ಕಿದ್ದರೆ ಈತ ಏನೆಲ್ಲಾ ಅವಾಂತರ ಮಾಡಿ ಬಿಡುತ್ತಿದ್ದನೋ ಎಂದು ಊಹಿಸಿಯೇ ತಳಮಳಗೊಂಡಿದ್ದರು. ಅಪರಾಧಿಗಳನ್ನು ಹಾಗೂ ಅಸ್ವಸ್ಥರನ್ನು ಕಡೆganiಸುವುದೇ ಜಾಣತನ ಎಂದೆಲ್ಲಾ ನಾವು ಅವರನ್ನು ಸಾಂತ್ವನಗೊಳಿಸಲು ಪ್ರಯತ್ನಿಸಿದಾಗ ಅವರು ಒಂದೆರಡಲ್ಲ ಏಳೇಳು ಉದಾಹರಣೆಗಳನ್ನು ನಮ್ಮ ಮುಂದಿಟ್ಟು ತಮ್ಮ ಆತಂಕವನ್ನು ಸಮರ್ಥಿಸಿಕೊಂಡರು. ಅವರ ಪ್ರಕಾರ ….
“… ಕ್ಷತ್ರಿಯನಾದವನಿಗೆ ನ್ಯಾಯವಾಗಿ ಒದಗಿ ಬಂದ ಕಾಳಗಕ್ಕಿಂತ ಮಿಗಿಲಾದ ಏಳಿಗೆಯಿಲ್ಲ.” (ಭಗವದ್ಗೀತೆ, ಅಧ್ಯಾಯ – 2, ಶ್ಲೋಕ – 31) ಎಂಬ ಶ್ರೀಮದ್ಭಗವದ್ಗೀತೆಯ ಪವಿತ್ರ ಶ್ಲೋಕವು ಈ ಮೂರ್ಖ ರವಿಯ ಕೈಗೆ ಸಿಕ್ಕರೆ ಆತ ಇದನ್ನೋದಿ, ಇದರ ಆಧಾರದಲ್ಲಿ, ಭಗವದ್ಗೀತೆಯು ಯುದ್ಧವನ್ನು ಪ್ರೋತ್ಸಾಹಿಸುತ್ತದೆ, ಮಾತ್ರವಲ್ಲ ಅದು ಯುದ್ಧವನ್ನು ವೈಭವೀಕರಿಸುವ ಗ್ರಂಥ ಎಂದೆಲ್ಲಾ ಆರೋಪಿಸುವ ಸಾಧ್ಯತೆ ಇದೆ.
“… ಸತ್ತರೆ ಸ್ವರ್ಗ ಸೇರುವೆ. ಗೆದ್ದರೆ ದೇಶವನ್ನಾಳುವೆ. ಆದ್ದರಿಂದ, ಕೌಂತೇಯ, ಹೋರಾಡುವ ತೀರ್ಮಾನ ತಳೆದು ಎದ್ದು ನಿಲ್ಲು.” (ಭಗವದ್ಗೀತೆ, ಅಧ್ಯಾಯ – 2, ಶ್ಲೋಕ – 37) ಎಂಬ ಶ್ಲೋಕವನ್ನು ಈ ಭ್ರಮನಿರಸಿತ ಫುಡಾರಿಯು ಓದಿದರೆ, ಆತ ಅದನ್ನೇ ಆಧಾರವಾಗಿಸಿ, ಶ್ರೀ ಕೃಷ್ಣ ಪರಮಾತ್ಮನು ಅನಗತ್ಯವಾಗಿ ರಕ್ತಪಾತ ನಡೆಸುವುದಕ್ಕೆ ಅರ್ಜುನನ ಮೇಲೆ ಒತ್ತಡ ಹೇರುತ್ತಿದ್ದಾನೆಂದು ದೂಷಿಸಬಹುದು.
“ಸುಖ-ದುಃಖಗಳನ್ನು, ಗಳಿಕೆ-ಇಳಿಕೆಗಳನ್ನು, ಸೋಲು-ಗೆಲುವನ್ನು ಒಂದೇ ನಿಟ್ಟಿನಿಂದ ಕಂಡು ಮತ್ತೆ ಹೋರಾಡತೊಡಗು. ಆಗ ನಿನಗೆ ಯಾವ ಪಾಪವೂ ತಟ್ಟದು.” (ಭಗವದ್ಗೀತೆ, ಅಧ್ಯಾಯ – 2, ಶ್ಲೋಕ – 38) ಈ ಶ್ಲೋಕವು ಅಕಸ್ಮಾತ್ ರವಿಯವರ ಪೆದ್ದುಹಸ್ತಕ್ಕೆ ಸಿಕ್ಕಿದರೆ ಅವರು, ನೋಡಿ, ಶ್ರೀಕೃಷ್ಣನು ಯುದ್ಧ, ರಕ್ತಪಾತ ಯಾವುದೂ ಪಾಪವೇ ಅಲ್ಲ ಎನ್ನುವ ಮೂಲಕ ವಿಧ್ವಂಸವನ್ನು ಪ್ರೋತ್ಸಾಹಿಸುತ್ತಿದ್ದಾನೆ ಎಂಬ ಹೀನ ಆರೋಪ ಮಾಡಬಹುದು.
“ಆದ್ದರಿಂದ ನೀನೆದ್ದುನಿಲ್ಲು. ಹಗೆಗಳನ್ನು ಗೆದ್ದು ಹೆಸರು ಗಳಿಸು. ಅರಸೊತ್ತಿಗೆಯ ತುಂಬು ಸಿರಿಯನುಣ್ಣು. ನಾನೇ ಇವರನ್ನು ಈಮೊದಲೇ ಕೊಂದಾಗಿದೆ. ಓ ಸವ್ಯಸಾಚಿ, ನೀನು ಬರಿಯ ನೆಪಮಾತ್ರನಾಗು.”
(ಭಗವದ್ಗೀತೆ, ಅಧ್ಯಾಯ – 11, ಶ್ಲೋಕ – 33) ಈ ಶ್ಲೋಕವೆಲ್ಲಾದರೂ ರವಿಯ ಕಣ್ಣಿಗೆ ಬಿದ್ದರೆ ಆತ ಹುಚ್ಚು ಉತ್ಸಾಹದಿಂದ ಇದನ್ನೇ ಪತ್ರಕರ್ತರು ಮತ್ತು ಕ್ಯಾಮರಾಗಳ ಮುಂದೆ ಓದಿ, ನಾಟಕಾಭಿಮಾನಿಗಳೇ, ನೋಡಿ, ಇಲ್ಲಿ ಶ್ರೀ ಕೃಷ್ಣನು ಮುಗ್ಧ ಅರ್ಜುನನಿಗೆ ಪ್ರಸಿದ್ದಿ ಮತ್ತು ಅರಸೊತ್ತಿಗೆಯ ಲಾಲಸೆ ನೀಡಿ, ಯಾವದೇ ಅಪರಾಧಪ್ರಜ್ಞೆ ಇಲ್ಲದೆ ರಕ್ತಪಾತ ಮಾಡೆಂದು ಅವನನ್ನು ಹುರಿದುಂಬಿಸುತ್ತಿದ್ದಾನೆ ಎಂದು ನಿರ್ಲಜ್ಜವಾಗಿ ಆರೋಪಿಸಬಹುದು.
“ನಾನೇ ಕೊಂದ ಇವರನ್ನು ನೀನು ಮುಗಿಸಿಬಿಡು: ದ್ರೋಣನನ್ನು, ಭೀಷ್ಮನನ್ನು, ಜಯದ್ರಥನನ್ನು ಮತ್ತು ಕರ್ಣನನ್ನು; ಹಾಗೆಯೇ, ಬೇರೆ ವೀರ ಹೋರಾಳುಗಳನ್ನು ಕೂಡಾ. ಕಂಗೆಡಬೇಡ, ಹೋರಾಡು. ಕಾಳಗದಲ್ಲಿ ಹಗೆಗಳನ್ನು ಗೆಲ್ಲಲಿರುವೆ.” (ಭಗವದ್ಗೀತೆ, ಅಧ್ಯಾಯ – 11, ಶ್ಲೋಕ – 34) ಭಗವದ್ಗೀತೆಯ ಈ ವಚನ ರವಿಯ ಕಪಿ ಮುಷ್ಟಿಗೆ ಸಿಕ್ಕರಂತೂ ಆತ ಉನ್ಮಾದಿತನಾಗಿ – ಭಾಯಿಯೋ, ಬೆಹನೋ, ನೋಡಿ, ನೋಡಿ, ಶ್ರೀಕೃಷ್ಣ ಪರಮಾತ್ಮನು ಅರ್ಜುನನ ಕೈಯಲ್ಲಿ ಎಂತೆಂತಹ ಮಹಾನುಭಾವರ ಹತ್ಯೆ ಮಾಡಿಸುತ್ತಿದ್ದಾನೆ ಎನ್ನುತ್ತಾ ಶ್ರೀ ಕೃಷ್ಣನ ಮೇಲೆ ಕೆಸರೆರಚಲು ಪ್ರಯತ್ನಿಸಬಹುದು.
“….ನನ್ನಲ್ಲೇ ಭಕ್ತಿಯಿಡುವವನು ಎಂತಹ ನಡತೆಗೇಡಿಯಾದರೂ ಮೂಲತಃ ಒಳ್ಳೆಯವನೆಂದೇ ತಿಳಿಯಬೇಕು….” (ಭಗವದ್ಗೀತೆ, ಅಧ್ಯಾಯ – 9, ಶ್ಲೋಕ – 30) ಎಂಬ ಭಗವದ್ಗೀತೆಯ ಶ್ಲೋಕವೆಲ್ಲಾದರೂ ಆ ಕಳಂಕಿತನ ಕೈಗೆ ಸಿಕ್ಕರೆ, ಆತ ಇದನ್ನೇ ಧರ್ಮನಿಂದನೆಯ ಅವಕಾಶವಾಗಿ ದುರುಪಯೋಗ ಪಡಿಸಬಹುದು. ನೋಡಿ, ಶ್ರೀ ಕೃಷ್ಣನಿಗೆ ಭಕ್ತಿ ಮುಖ್ಯವೇ ಹೊರತು ಚಾರಿತ್ರ್ಯವಾಗಲಿ ಸನ್ನಡತೆಯಾಗಲಿ ಮುಖ್ಯವಲ್ಲ ಎಂದು ಆತ ಶ್ರೀ ಕೃಷ್ಣನ ಮೇಲೆ ಕಳಂಕ ಹಚ್ಚುವ ಹೀನ ಪ್ರಯತ್ನ ನಡೆಸಬಹುದು.
“ಪಾರ್ಥ, ನನಗೆ ಶರಣು ಬಂದವರು ಯಾವುದೋ ಪಾಪದಿಂದ ಹೆಣ್ಣಾಗಿ, ವೈಶ್ಯರಾಗಿ, ಶೂದ್ರರಾಗಿ ಸಾಧನೆಯಿಂದ ವಂಚಿತರಾದರೂ ಹಿರಿಯ ನೆಲೆಯಾದ ನನ್ನನ್ನೇ ಪಡೆಯುತ್ತಾರೆ.” (ಭಗವದ್ಗೀತೆ, ಅಧ್ಯಾಯ – 9, ಶ್ಲೋಕ – 32) ಈ ಶ್ಲೋಕವೆಲ್ಲಾದರೂ ಬುದ್ಧಿಭ್ರಮಿತ ರವಿಯ ಕಣ್ಣಿಗೆ ಬಿದ್ದರೆ ಆತ ಕೇವಲ ಇಷ್ಟನ್ನೇ ಪುರಾವೆಯಾಗಿಸಿ, ಶ್ರೀ ಕೃಷ್ಣನು ಸ್ತ್ರೀಯರನ್ನು, ವೈಶ್ಯರನ್ನು ಮತ್ತು ಶೂದ್ರರನ್ನು ಅಪಮಾನಿಸಿದ್ದಾನೆಂದು ಆರೋಪಿಸಬಹುದು. ಯಾರಾದರೂ ಹೆಣ್ಣಾಗಿ, ವೈಶ್ಯರಾಗಿ ಅಥವಾ ಶೂದ್ರರಾಗಿ ಹುಟ್ಟಿದ್ದರೆ ಅದು ಅವರ ಪಾಪದ ಫಲ ಎಂದು ಶ್ರೀ ಕೃಷ್ಣನು ಹೇಳಿರುವುದು, ಆ ಮೂರೂ ವರ್ಗಗಳ ಪಾಲಿಗೆ ಅಪಮಾನಕಾರಕ ಎಂದು ಆತ ಆರೋಪಿಸಬಹುದು. ಅಷ್ಟೇ ಅಲ್ಲ, ದೇಶದಲ್ಲಿ ಆಗುತ್ತಿರುವ ಎಲ್ಲ ಅನಾಹುತಗಳಿಗೆ ಈ ಗ್ರಂಥವೇ ಕಾರಣ ಎಂದೆಲ್ಲಾ ಹುಚ್ಚುಹುಚ್ಚಾಗಿ ದೂಷಿಸಬಹುದು.
ನಮ್ಮ ಗೀತಾಭಿಮಾನಿ ಮಿತ್ರನ ಈ ಕಾಳಜಿ ಸಹಜವಾಗಿತ್ತು. ಸಾಂತ್ವನದ ಯಾವ ಮಾತಿಗೂ ಅವರು ಕಿವಿಗೊಡುತ್ತಿರಲಿಲ್ಲ. ಕೊನೆಗೆ ಮಿತ್ರರೆಲ್ಲಾ ಸೇರಿ “ನೀವು ಸುಮ್ಮನೆ ನಿದ್ದೆಗೆಡಬೇಡಿ. ತಿಳಿಗೇಡಿಗಳು ಎಲ್ಲ ಸಮಾಜಗಳಲ್ಲೂ ಇರುತ್ತಾರೆ. ಸಮಾಜವನ್ನು ಸ್ವಸ್ಥವಾಗಿಡುವುದಕ್ಕಾಗಿ ಆ ಮತಿಭ್ರಮಿತನಿಗೆ ಮಾನಸಿಕ ಚಿಕಿತ್ಸೆ ಒದಗಿಸುವ ಶ್ರಮ ನಡೆಯುತ್ತಿದೆ. ಆತ ಸಂಪೂರ್ಣ ಸ್ವಸ್ಥನಾಗುವ ತನಕ ಯಾವುದೇ ಧಾರ್ಮಿಕ ಅಥವಾ ಆಧ್ಯಾತ್ಮಿಕ ಗ್ರಂಥವು ಅವರ ಕೈಗೆ ಸಿಗದಂತೆ ನಾವೂ ಎಚ್ಚರ ವಹಿಸುತ್ತೇವೆ, ಅವರ ಕುಟುಂಬಸ್ಥರು ಮತ್ತು ಊರವರಿಗೂ ಹೇಳುತ್ತೇವೆ, ಹತ್ತಿರದ ಪೊಲೀಸ್ ಠಾಣೆಗೂ ಮನವಿ ಮಾಡುತ್ತೇವೆ” ಎಂದು ಆಶ್ವಾಸನೆ ನೀಡಿದ ಬಳಿಕ ಮಾತ್ರ ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇದೀಗ ಆ ಗೀತಾಭಿಮಾನಿ ಮಿತ್ರನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಹೊಣೆ ನಮ್ಮ ಮೇಲೆ ಮಾತ್ರವಲ್ಲ, ಸಂಪೂರ್ಣ ಕನ್ನಡಿಗ ಸಮಾಜದ ಮೇಲಿದೆ.
ಈ ಮಧ್ಯೆ, ಅಪ್ಪಿ ತಪ್ಪಿ ಎಲ್ಲಾದರೂ ಭಗವದ್ಗೀತೆಯ ಪ್ರತಿಯೇನಾದರೂ ಆತನ ಕೈಗೆ ಸಿಕ್ಕಿ ಬಿಟ್ಟರೆ ನಾವು ಆ ನಮ್ಮ ಮುಗ್ಧ ಗೀತಾಭಿಮಾನಿ ಮಿತ್ರನಿಗೆ ಮುಖ ತೋರಿಸುವುದಾದರೂ ಹೇಗೆ? ಎಂಬ ಆತಂಕ ನಮ್ಮನ್ನು ಕಾಡುತ್ತಿದೆ.